ಗಣೇಶ ವಿಸರ್ಜನಾ ಮೆರವಣಿಗೆ ಡಿಜೆ ಬಳಸದೆ ಅದರ ಹಣದಿಂದ ರಸ್ತೆ ದುರಸ್ತಿಗೆ ಮುಂದಾದ ಜನ

ರಾಜ್ಯದಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆ ವೇಳೆ ಅನೇಕ ಕಡೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ D J ಹಚ್ಚಿ ಗಣೇಶನ ಭಕ್ತರು ಕುಣಿದು ಕುಪ್ಪಳಿಸಿದ್ದಾರೆ. ಅದೇ ರೀತಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕೂಡ ಹಿಂದೂ ಮಹಾಗಣಪತಿ ಕಾಮನಕಟ್ಟೆ ಗೆಳೆಯರ ಬಳಗದಿಂದ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗಿದೆ. 

ಕಳೆದ ಒಂಬತ್ತು ವರ್ಷಗಳಿಂದ ಈ ತಂಡ ಗ್ರಾಮದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ. ಗಣೇಶ ವಿಗ್ರಹ ಮೆರವಣಿಗೆ ಕಾರ್ಯಕ್ರಮದ DJಗೆ ಬ್ರೇಕ್ ಹಾಕಿ ಪ್ರತಿವರ್ಷ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿರುವ ಗ್ರಾಮದ ಜನರು, ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆಯ ಸಮಯದಲ್ಲಿ DJ ತಂದು, ಇಡೀ ಗ್ರಾಮದ ಜನರು ಕುಣಿದು ಕುಪ್ಪಳಿಸುತ್ತಿದ್ದರು. ಆದ್ರೆ, ಡಿಜೆ ಹಚ್ಚಿದರೆ ಅದರ ಆನಂದ ಇರುವುದು ಕೇವಲ ನಾಲ್ಕೈದು ಗಂಟೆ ಮಾತ್ರ. ಆದ್ರೆ, ಇದನ್ನು ಹೊರತುಪಡಿಸಿ ಏನಾದರೂ ಸಮಾಜಮುಖಿ ಕೆಲಸ ಮಾಡೋಣ ಎಂದು ಗೆಳೆಯರ ಬಳಗದ ಸದಸ್ಯರು ನಿರ್ಧರಿಸಿದರು. ಅದರಂತೆ ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಹೋಗುವ ರಸ್ತೆ ದುರಸ್ಥಿಯನ್ನು ಮಾಡಲು ಮುಂದಾಗಿದ್ದು, ರಸ್ತೆ ದುರಸ್ಥಿ ಕೆಲಸವನ್ನು ಆರಂಭಿಸಿದ್ದಾರೆ.

ಜನಹಿತಸ್ಕೋಸ್ಕರ ಜನರಿಂದಲೇ ರಸ್ತೆ ದುರಸ್ಥಿ ಕೆಲಸ

ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಬರಲು ಪ್ರಯಾಣಿಕರು ಹರಸಾಹಸ ಪಡಬೇಕಾಗಿತ್ತು. ರಸ್ತೆಯಲ್ಲಿ ಬಹುತೇಕ ತಗ್ಗುಗುಂಡಿಗಳೇ ಇವೆ. ಹೀಗಾಗಿ ಹತ್ತು ಕಿಲೋ ಮೀಟರ್ ಪ್ರಯಾಣಕ್ಕೆ ಒಂದು ಗಂಟೆ ಸಮಯಾವಕಾಶ ಬೇಕಾಗಿತ್ತು. ತಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಳೆದ ಅನೇಕ ವರ್ಷಗಳಿಂದ ನಿರ್ಮಿಸಿಲ್ಲ. ಇರುವ ರಸ್ತೆ ಕೂಡ ಹಾಳಾಗಿ ಹೋಗಿದ್ದರಿಂದ ಗ್ರಾಮದ ಜನರು ಹೊಸದಾಗಿ ರಸ್ತೆ ನಿರ್ಮಾಣ ಮಾಡಿ, ಇಲ್ಲವೇ ರಸ್ತೆಯನ್ನು ರಿಪೇರಿಯಾದರೂ ಮಾಡಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಆದರೂ ಯಾರೂ ಕೂಡ ಜನರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡಿರಲಿಲ್ಲ. ಹೀಗಾಗಿ ಡಿಜೆ ಗಾಗಿ ಬಳಸಲು ಉದ್ದೇಶಿಸಲಾಗಿದ್ದ ಎರಡು ಲಕ್ಷಕ್ಕೂ ಅಧಿಕ ಹಣವನ್ನು, ಡಿಜೆ ಬದಲಾಗಿ ರಸ್ತೆ ರಿಪೇರಿ ಮಾಡಲು ನಿರ್ಧಿರಿಸಿದ್ದಾರೆ. ಅದರಂತೆ ಕಿನ್ನಾಳ ಗ್ರಾಮದಿಂದ ಸರಿಸುಮಾರು ಎಂಟರಿಂದ ಒಂಬತ್ತು ಕಿಲೋ ಮೀಟರವರಗೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಮುರುಮ್ ಹಾಕಿ, ಸಮತಟ್ಟು ಮಾಡುವ ಕೆಲಸವನ್ನು ಗ್ರಾಮಸ್ಥರು ಆರಂಭಿಸಿದ್ದಾರೆ.


ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕು. ಆದ್ರೆ, ಅವರು ತಾವು ಮಾಡುವ ಕೆಲಸವನ್ನು ಮರೆತಿದ್ದರಿಂದ, ಜನರು ಅನಿವಾರ್ಯವಾಗಿ ಇದೀಗ ತಾವೇ ರಸ್ತೆ ದುರಸ್ಥಿ ಮಾಡಲು ಆರಂಭಿಸಿದ್ದಾರೆ. ಜೊತೆಗೆ ಡಿಜೆ ಗಾಗಿ ಬಳಸಲು ಮುಂದಾಗಿದ್ದ ಹಣವನ್ನು ತಮ್ಮೂರ ರಸ್ತೆ ರಿಪೇರಿಗೆ ಬಳಸಲು ಮುಂದಾಗಿರೋದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


ವರದಿ - ಖಡಕ್ ಕನ್ನಡ ನ್ಯೂಸ್ ಕೊಪ್ಪಳ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!