ಕಮತಗಿ: “ ಸಾಧನೆ ನಿಂತ ನೀರಿನಂತಿರಬಾರದು, ಹರಿಯುವ ನೀರಿನಂತಿರಬೇಕು” ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಹೇಳಿದರು. ಪಟ್ಟಣದ ಹೊಳೆ ಹುಚ್ಚೇಶ್ವರ ಸಹಕಾರಿ ಸಂಘದ ಸಭಾಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಪಹುಣ್ಣು ಕಾಯಿಲೆ ಅತ್ಯಂತ ಭಯಾನಕವಾಗಿದ್ದು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕೂಡ ಈ ಕಾಯಿಲೆಗೆ ಒಳಗಾಗಿದ್ದರು ಎಂದು ನೆನಪಿಸಿದರು. ಇಂತಹ ಸವಾಲಿನ ರೋಗಗಳಿಗೆ ಚಿಕಿತ್ಸೆ ನೀಡುತ್ತ ಬಂದಿರುವ ಪಟ್ಟಣದ ಅಶೋಕ ಚಿತ್ರಗಾರ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು. ಜೋಗತಿ ಹುಚ್ಚಮ್ಮ ಅವರು ಬಾಲ್ಯದಿಂದಲೇ ದೇವರ ಸೇವೆಯಲ್ಲಿ ನಿರಂತರವಾಗಿ ತೊಡಗಿರುವುದು ಸಮಾಜಕ್ಕೆ ಪ್ರೇರಣೆ ನೀಡುವಂತಿದೆ ಎಂದರು.
ಪತ್ರಿಕಾರಂಗದಲ್ಲಿ ತಮ್ಮ ವಿಶೇಷ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದಿರುವ ಪತ್ರಕರ್ತ ಸುನೀಲ ಮಾರಬಸರಿ ಅವರ ಸೇವೆಯನ್ನು ಅವರು ಮೆಚ್ಚಿದರು. ಅಳಿವಿನಂಚಿನಲ್ಲಿರುವ ಕರಡಿ ಮಜಲು ಕಲೆಯನ್ನು ತಮ್ಮ ಇಳಿವಯಸ್ಸಿನಲ್ಲೂ ಮುಂದುವರಿಸಿಕೊಂಡು ಬಂದಿರುವ ಉಮ್ಮಣ್ಣಪ್ಪ ಯರಗಲ್ಲ ಅವರ ಪರಿಶ್ರಮವನ್ನು ಕೊಂಡಾಡಿದರು.
ನಮ್ಮ ಊರಿನವರಾದ ಶಬ್ಬೀರ ಬಿಜಾಪೂರ ಅವರು ಅಲ್ಪವಯಸ್ಸಿನಲ್ಲೇ ಕಾನಿಪ ಸಂಘದ ಜಿಲ್ಲಾ ಘಟಕದಲ್ಲಿ ಸ್ಥಾನ ಪಡೆದಿರುವುದು ನಮ್ಮೂರಿನ ಹೆಮ್ಮೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. “ಇಷ್ಟು ಸಾಧಕರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ” ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಪ್ರಧಾನ ವ್ಯವಸ್ಥಾಪಕ ಶಿವಶಂಕರ ಮಾಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ರಮೇಶ ಜಮಖಂಡಿ ನಿರೂಪಿಸಿ ವಂದಿಸಿದರು.
ವರದಿ ✍️ ಶಂಕರ್ ವನಕಿ ಕಮತಗಿ
