ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಮೊಹರಂ ಹಬ್ಬ ಶಾಂತಿ ಸೌಹಾರ್ದತೆಯಿಂದ ಜರುಗಿತು ಅಲಾಯಿ ದೇವರುಗಳು ಪಟ್ಟಣದಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ಆಶೀರ್ವಾದ ನೀಡುತ್ತಾ ನದಿಗೆ ತೆರಳಿ ಮತ್ತೆ ಸ್ವಸ್ಥಾನಕ್ಕೆ ಬಂದು ಅಲಾಯಿ ದೇವರುಗಳು ತಲುಪಿದವು
ವರದಿ- ✍️ ಶಂಕರ್ ವನಕಿ ಕಮತಗಿ
ಮೊಹರಂ ಆಚರಣೆ ಬಗ್ಗೆ ಕಮತಗಿಯ ಶಿಕ್ಷಕ ಶ್ರೇಯಾಂಶ ಕೋಲ್ಹಾರ ಅವರಿಂದ ವಿಶೇಷ ಲೇಖನ
ಬಹುಮನಿ ಸುಲ್ತಾನರು ಮತ್ತು ಬಿಜಾಪುರ ಆದಿಲ್ ಶಾಹಿ ದೊರೆಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ಉತ್ತರ ಕರ್ನಾಟಕದ ಅಪಾರ ಪ್ರಮಾಣದ ಪ್ರದೇಶದಲ್ಲಿ ಮೊಹರಂ ಆಚರಣೆ ತುಂಬಾ ವಿಶಿಷ್ಟವಾಗಿರುತ್ತದೆ. ಬಾಗಲಕೋಟ, ವಿಜಯಪುರ, ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ ಮುಂತಾದ ಪ್ರದೇಶಗಳಲ್ಲಿ ಮೊಹರಂ ಒಂದು ಮಹತ್ವದ ಹಬ್ಬವಾಗಿ ಸುಮಾರು ಬಹುಕಾಲದಿಂದಲೂ ಆಚರಿಸಲ್ಪಡುವುದು. ಕಾಲಕಾಲಕ್ಕೆ ತಕ್ಕಂತೆ ಇದು ಜನಮಾನಸವಾಗಿ ಸ್ಥಳೀಯ ಸಂಪ್ರದಾಯಗಳೊಂದಿಗೆ ಬೆರೆತು, ರೂಪಾಂತರಗೊಂಡು, ಹಾಡು, ಸಂಗೀತ, ಕುಣಿತ, ಸೋಗುಗಳೊಂದಿಗೆ ಬೆರೆತು ಊರ ಹಬ್ಬವಾಗಿ ಮಾರ್ಪಟ್ಟಿರುತ್ತದೆ. ಅಷ್ಟೆ ಅಲ್ಲ ಈ ಭಾಗದ ಜನರ ಜನಪದ ಹಬ್ಬವಾಗಿದೆ. ಜಾತಿ ಮತಗಳ ಭೇದವಿಲ್ಲದೆ ಎಲ್ಲ ಸಮುದಾಯದ ಜನರು ಒಂದಾಗಿ ಆಚರಿಸುತ್ತಾ ಬರುತ್ತಿರುವುದು ಇದರ ವೈಶಿಷ್ಟ್ಯತೆಯಾಗಿದೆ. ಶಾಹಿ ದೊರೆಗಳ ನೇರ ಆಳ್ವಿಕೆಗೆ ಒಳಪಟ್ಟಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಂತು ಮೊಹರಂ ಆಚರಣೆಯ ಮಹತ್ವದ ಕೇಂದ್ರವಾಗಿವೆ. ಕಾರಣ ಷಿಯಾ ಪಂಗಡದ ದೊರೆಗಳಾಗಿದ್ದ ಶಾಹಿ ದೊರೆಗಳು ಈ ಮೊಹರಂ ಆಚರಣೆಗೆ ಅಪಾರ ಪ್ರಮಾಣದ ಬೆಂಬಲವನ್ನು ನೀಡಿದ್ದರು. ಇವರ ಆಳ್ವಿಕೆಯ ಸಮಯದಲ್ಲಿ ಮೊಹರಂ ಆಚರಣೆ ಗ್ರಾಮೀಣ ಭಾಗದಲ್ಲಿ ಜನಮಾನಸವಾಯಿತು.
*ಮೊಹರಂ ಹಿನ್ನೆಲೆ*:
ಮೊಹರಂ ಎಂದರೆ ನಿಷಿದ್ಧವಾದದು ಎಂದರ್ಥ. ಅಂದರೆ ಇದೊಂದು ಶೋಕಾಚರಣೆಯ ಹಬ್ಬ. ಶ್ರದ್ದಾವಂತ ಮುಸ್ಲಿಮರ ಪಾಲಿಗೆ ಒಂದು ರೀತಿಯಲ್ಲಿ ಸೂತಕದ ಹಬ್ಬ. ಕಾರಣ ಏಳನೆಯ ಶತಮಾನದಲ್ಲಿ ಖಲಿಫ್ ಪದವಿಗಾಗಿ ಅರಬ ಸ್ಥಾನದ ಕರ್ಬಲ ಎಂಬಲ್ಲಿ ಉಮಯ್ಯಾ ಮತ್ತು ಹಾಶೀಮಿ ಎಂಬ ಎರಡು ಪಂಗಡಗಳ ನಡುವೆ ನಡೆದ ಭೀಕರ ಕಾಳಗ, ಇದರಲ್ಲಿ ಹುತಾತ್ಮರಾದ ಪೈಗಂಬರರ ಅನುಯಾಯಿಗಳ ದಾರುಣ ಅಂತ್ಯದ ಕುರಿತ ಒಂದು ಶೋಕಾಚರಣೆಯ ಹಬ್ಬವೇ ಮೊಹರಂ. ಪೈಗಂಬರದ ಮರಣ ನಂತರ ಖಲೀಫ್ ಪದವಿಗಾಗಿ ಉಮಯ್ಯ ವಂಶದ ಯಜೀದ್ ಮತ್ತು ಪೈಗಂಬರರ ವಂಶಜರಾದ ಹಾಶೀಮಿ ಪಂಗಡಕ್ಕೆ ಸೇರಿದ ಹುಸೇನ್ ಮತ್ತು ಅವನ ವಂಶಜರು ವರ್ಷಣೆಗೆ ಇಳಿಯುತ್ತಾರೆ. ಮಕ್ಕ, ಮದೀನಾ ಮತ್ತು ಕೂಫಾ ಪ್ರಾಂತ್ಯಗಳಲ್ಲಿದ್ದ ಜನತೆ ಇದರಲ್ಲಿ ಸಂಪೂರ್ಣವಾಗಿ ಹುಸೇನರ ಬೆಂಬಲಕ್ಕೆ ನಿಲ್ಲುತ್ತಾರೆ. ಕ್ರೂರ ಯಜೀದನನ್ನು ಅಂತ್ಯಗೊಳಿಸಲು ಬೆಂಬಲ ನೀಡುತ್ತಾರೆ. ಹುಸೇನ್ ತನ್ನ 72 ಜನ ಸಹಚರರೊಂದಿಗೆ ಯಜೀದಿನ ಜೊತೆ ಕರ್ಬಲ ಪ್ರದೇಶದಲ್ಲಿ ಕಾಳಗಕ್ಕೆ ಇಳಿಯುತ್ತಾನೆ. ದುರ್ಗಮ ಮರಳುಗಾಡಿನ ಭೂಮಿಯಲ್ಲಿ ಹುಸೇನನ ಸಹಚರರಿಗೆ ಮತ್ತು ಆತನ ವಂಶಜರಿಗೆ ಯಜೀದನ ಸೈನ್ಯ ತೀವ್ರ ತೊಂದರೆ ಕೊಡುತ್ತದೆ. ಮತ್ತು ಕಾಳಗದಲ್ಲಿ ಹುಸೇನನ ಮಗ ಅಸ್ಕರ ಅಲಿ ಮತ್ತು ಅಳಿಯ ಕಾಶಿಮನನ್ನು ಕೂಡಾ ಹತ್ಯೆ ಮಾಡುತ್ತಾರೆ, ನಂತರ ಹುಸೇನರನ್ನು ಕೂಡ ಕೊಂದು ಅವರ ಕೈಗಳನ್ನು ಕಡಿದು ಯಜೀದ ತನ್ನ ಅರಮನೆಯಲ್ಲಿ ಸಂಭ್ರಮಿಸುತ್ತಾನೆ. ಹುಸೇನ್ ಮತ್ತು ಆತನ ಸಹಚರರ ದಾರುಣ ಅಂತ್ಯವನ್ನು ನೆನೆದು ಮಕ್ಕ ಹಿ ಮದೀನ ಮತ್ತು ಕೂಫಾ ಪ್ರಾಂತದ ಜನರು ಅಪಾರ ಶೋಕ ವ್ಯಕ್ತಪಡಿಸುತ್ತಾರೆ. ಅದರ ಶೋಕಾಚರಣೆಯ ನಿಮಿತ್ತ ಹಾಡು ಕಟ್ಟಿ ಹಾಡುತ್ತಾ ದುಃಖ ವ್ಯಕ್ತಪಡಿಸುತ್ತಾರೆ. ಅವರ ಕೈಗಳನ್ನು ಸಾಂಕೇತಿಕವಾಗಿ ಪಂಜಾಗಳ ರೂಪದಲ್ಲಿ ಇರಿಸಿ ಶೋಕವನ್ನು ವ್ಯಕ್ತಪಡಿಸುತ್ತಾರೆ. ಇದನ್ನೇ ಮೊಹರಂ ಹಬ್ಬ ಎಂದು ಅರಬ್ ಪ್ರಾಂತದಲ್ಲಿ ಶೋಕಾಚರಣೆಯ ಹಬ್ಬವಾಗಿ ಅಂದಿನಿಂದ ಆಚರಿಸಿಕೊಂಡು ಬರಲಾಗಿದೆ
ಏಳನೇ ಶತಮಾನದಲ್ಲಿ ಆರಬ್ ಪ್ರಾಂತದಲ್ಲಿ ನಡೆದ ಕರ್ಬಲ ಕಾಳಗದ ದುರಂತ ನೆನಪಿನ ಆಚರಣೆಯ ಒಂದು ಹಬ್ಬ ಇಂದು ಸಾಂಸ್ಕೃತಿಕ ವಿನಿಮಯದ ರೂಪದಲ್ಲಿ ಭಾರತಕ್ಕೆ ಬಂದಿರುತ್ತದೆ.
ಮೊದಲಿನಿಂದಲೂ ಅರಬ್ನಾ ನಾಡಿನೊಂದಿಗೆ ವಾಣಿಜ್ಯ ವ್ಯಾಪಾರ ಹೊಂದಿದ್ದ ಭಾರತದ ವ್ಯಾಪಾರಿಗಳು, ವಲಸಿಗರು ಹಾಗೂ ಕೆಲವು ಧಾಳಿಕೋರರು ಈ ಸಂಸ್ಕೃತಿಯನ್ನು ಭಾರತಕ್ಕೆ ಹರಿದು ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರಲ್ಲೂ ಬಹುಮನಿ ಸುಲ್ತಾನರು ಮತ್ತು ಷಾಹಿ ದೊರೆಗಳು ಕರ್ನಾಟಕದ ಉತ್ತರ ಭಾಗದಲ್ಲಿ ಈ ಹಬ್ಬವನ್ನು ಜನಮಾನಸಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಈ ಮೊಹರಂ ಸ್ಥಳಿಯ ಸಮಾಜಗಳ ಜೊತೆ ಬೆರೆತು, ಇಲ್ಲಿನ ಸಂಸ್ಕೃತಿಗಳೊಂದಿಗೆ ವಿನಿಮಯಗೊಂಡು ಹಾಡು, ಸಂಗೀತ, ಕುಣಿತ ಸೋಗುಗಳೊಂದಿಗೆ ಕೂಡಿ ಊರ ಹಬ್ಬವಾಗಿಯೇ ಮಾರ್ಪಟ್ಟಿತು. ಗ್ರಾಮೀಣ ಭಾಗದ ಜನರಿಗಂತು ಈ ಮೊಹರಂ ತಮ್ಮ ಮನೆಯ ಹಬ್ಬ. ತಮ್ಮ ಊರ ಉತ್ಸವದಂತೆ ಆಚರಿಸುತ್ತಾರೆ. ಈ ಭಾಗದಲ್ಲಂತೂ ಮೊಹರಂ ಆಚರಣೆ ಯಾವದೇ ಒಂದು ನಿರ್ದಿಷ್ಟ ಕೋಮಿಗೂ ಸೀಮಿತವಾಗಿಲ್ಲ. ಎಲ್ಲ ಜಾತಿಯ ಜನರು ಇದರ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ಮೊಹರಂ ಆಚರಣೆ ಅತ್ಯಂತ ವಿಶಿಷ್ಟವಾಗಿದೆ. ಜಿಲ್ಲೆಯ 80% ಪ್ರಮಾಣದ ಗ್ರಾಮೀಣ ಭಾಗದಲ್ಲಿ ಮೊಹರಂ ಆಚರಣೆಯನ್ನು ಹಿಂದುಗಳೇ ಆಚರಿಸುತ್ತಿರುವುದು ಇದರ ವಿಶೇಷವಾಗಿರುತ್ತದೆ.