ಕಮತಗಿಯ ಹುಚ್ಚೇಶ್ವರ ಜಾತ್ರೆಯ ಧಾರ್ಮಿಕ ವೈಭವ

 *ಕಮತಗಿಯ ಹುಚ್ಚೇಶ್ವರ ಜಾತ್ರೆಯ ಧಾರ್ಮಿಕ ವೈಭವ*


ಕಮತಗಿ - ಪಟ್ಟಣದ ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ಶ್ರೀ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ಫೆಬ್ರವರಿ 7 ಮತ್ತು 8 ರಂದು ಭಕ್ತಿಭಾವ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಜರುಗಲಿದೆ.

ಪಟ್ಟಣದ ಆರಾಧ್ಯ ದೈವವಾದ ಶ್ರೀ ಹೊಳೆ ಹುಚ್ಚೇಶ್ವರನ ಜಾತ್ರೆಗೆ ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸುವುದು ವಿಶೇಷ. ಈ ವರ್ಷದ ಜಾತ್ರೆಯ ಅಂಗವಾಗಿ ಫೆ.7 ರಂದು ಬೆಳಿಗ್ಗೆ 5 ಗಂಟೆಗೆ ಹಳೆಯ ರಥ ಬೀದಿಯಲ್ಲಿ ಬೆಳಗಿನ ಹುಚ್ಚಯ್ಯ ಲಘು ರಥೋತ್ಸವದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಸಿಡಿಮದ್ದುಗಳೊಂದಿಗೆ ನಡೆಯುವ ಈ ಲಘು ರಥೋತ್ಸವ ಜಾತ್ರೆಯ ವೈಭವಕ್ಕೆ ಮತ್ತಷ್ಟು ಮೆರುಗು ನೀಡಲಿದೆ.

ಅದೇ ದಿನ ಬೆಳಿಗ್ಗೆ 9 ಗಂಟೆಗೆ ನಿಂಬಾಳ ವಿರಕ್ತ ಮಠದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಜಿ ಅವರು ಶ್ರೀ ಹುಚ್ಚೇಶ್ವರ ದಾಸೋಹ ಭವನವನ್ನು ಉದ್ಘಾಟಿಸಲಿದ್ದು, ಮಧ್ಯಾಹ್ನ ವಿವಿಧ ಜಾನಪದ ಕಲಾತಂಡಗಳು ಹಾಗೂ ಅಶ್ವಸಹಿತ ಮಹಾ ರಥದ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.

ಸಂಜೆ 5.30ಕ್ಕೆ ನಾಡಿನ ಸಮಸ್ತ ಹರ ಗುರು ಚರಮೂರ್ತಿಗಳು ಹಾಗೂ ಭಕ್ತ ಸಮೂಹದ ಸಮ್ಮುಖದಲ್ಲಿ ಬಂಗಾರದ ಕಳಸ ಹೊತ್ತ ಶ್ರೀ ಹೊಳೆ ಹುಚ್ಚೇಶ್ವರ ಮಹಾ ರಥೋತ್ಸವ ಜರುಗಲಿದ್ದು, ರಥ ಬೀದಿಯಲ್ಲಿ ಭಕ್ತರ ಸಾಗರ ಹರಿದುಬರಲಿದೆ. ರಾತ್ರಿ ವೇಳೆಗೆ ಜಾನಪದ ಕಲಾ ಉತ್ಸವ ಹಾಗೂ ನೃತ್ಯ ರೂಪಕ ಪ್ರದರ್ಶನಗಳು ಜಾತ್ರೆಯ ರಂಗು ಹೆಚ್ಚಿಸಲಿವೆ.

ಫೆ.8 ರಂದು ಸಂಜೆ 5 ಗಂಟೆಗೆ ಮಹಿಳಾ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಕಮತಪುರ ನಾಡಿನ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದೊಂದಿಗೆ ಜಾತ್ರೆಗೆ ವಿಶೇಷ ಗೌರವ ನೀಡಲಾಗುತ್ತದೆ. ಇದೇ ದಿನ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳು ಭಕ್ತರನ್ನು ಮನರಂಜಿಸಲಿವೆ.

ಇದೇ ವೇಳೆ “ಕಮತಪುರ ಉತ್ಸವ–2026: ನಮ್ಮ ಜನ, ನಮ್ಮ ಪರಂಪರೆ” ಅಂಗವಾಗಿ ಜಾನಪದ, ಸಂಗೀತ, ಕುಸ್ತಿ, ಕಬ್ಬಡ್ಡಿ, ಕ್ರಿಕೆಟ್, ಬಂಡಿ ರೇಸ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಕಮತಗಿ ಪಟ್ಟಣ ಜಾತ್ರೆಯ ಸಂಭ್ರಮದಲ್ಲಿ ಮುಳುಗಲಿದೆ ಎಂದು ಶ್ರಿ ಮ ನಿ ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ತಿಳಿಸಿದರು ಇದೆ ಸಂಧರ್ಭದಲ್ಲಿ ಪ್ರೋಫೇಸರ್ ವಿ ಬಿ ಬೀರಕಬ್ಬಿ, ಡಾ. ಪಿ ಎಂ ಗುರುವಿನಮಠ ಸೇರಿದಂತೆ ಶ್ರೀಮಠದ ಭಕ್ತರು ಹಿರಿಯರು ಉಪಸಿದ್ದರು



ವರದಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು